Index   ವಚನ - 228    Search  
 
ವರ್ಣಾಶ್ರಮವ ಮಾಡಿ ವರ್ಣವ ಕಲ್ಪಿಸಿದ ಮರ್ಮಿಗನೊಬ್ಬನೆ. ಮರನ ಕೆತ್ತಿ ಗೊಂಬೆಯ ಮಾಡಿ, ಕಳೆಯವನಿಟ್ಟು ನಿರ್ಮಳನಿಜ ನಿತ್ಯಸೂತ್ರವ ಕಲ್ಪಿಸಿದ ಸೂತ್ರಿಕನೊಬ್ಬನೆ. ನೆರೆನಂಬಿದಲ್ಲಿ ಸ್ಥಾವರ ವರ್ಣದೊಳಗಲ್ಲ. ವರಗುರು ಸನ್ನಿಹಿತ ವಸ್ತುನಿರ್ದೇಶನು. ಬರಿಮನೆಗೆ ಬಾಗಿನವ ಕೊಟ್ಟಂತೆ ಕಲ್ಪಿಸಿದ ಬಯಲನು. ಪರ್ಣದೊಳು ಪುಟ್ಟಿದ ಪಣ್ಣಿನೊಳು ಬೀಜ ಹೊರತಾದಂತೆ, ನಿರ್ಣುಯವು ನಿಮ್ಮ ಪ್ರಾಣಪ್ರಣಮ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.