ಆದಿಪೂರ್ವಭಕ್ತಿಯೆಂಬ ಪುತ್ತಳಿಗೆ
ಅನಾದಿ ಕೊಟ್ಟ ಉಪದೇಶವೆಂತೆಂದಡೆ:
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಪಂಚಸ್ಥಲ
ಅಪೂರ್ವ ಅಪೂರ್ವ.
ಪಂಚಸ್ಥಲಕ್ಕೆ ಪಂಚಮಠ, ಪಂಚಘಟ
ಪಂಚೇಂದ್ರಿಯಗಳ ಹಂಚಿಹಾಕಿ, ಅಂಗವ ಕಲ್ಪಿಸಿದ ಗುರು.
ತತ್ವದೀಕ್ಷೆ ಪೂರ್ವದೀಕ್ಷೆಯನ್ನಳಿದು
ಪುನರ್ದೀಕ್ಷೆಯ ಕೊಟ್ಟೇನೆಂಬ
ಗುರುದ್ರೋಹಿಗಳೇ ಕೇಳಿರೊ.
ಪೂರ್ವವನಳಿಯೆ ನಿಮ್ಮಳವೇ?
ಪುನರ್ವವನಿಳುವೆ ನಿಮ್ಮಳವೆ?
ಅಪೂರ್ವ ಅಪೂರ್ವ ಆ ಸ್ಥಲ.
ಆದಿಯ ಶರಣಂಗಲ್ಲದೆ
ಪೂರ್ವದೀಕ್ಷೆ ಪುನರ್ದೀಕ್ಷೆ ಇಲ್ಲ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.