Index   ವಚನ - 318    Search  
 
ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನೆಂದು ಶಬ್ದವ ನುಡಿವ ಸಾಮ್ಯವಂತ ಅಣ್ಣಗಳು ನೀವು ಕೇಳಿರಯ್ಯ: ಭಕ್ತನ ಭಾವಂತು, ಮಹೇಶ್ವರ ಮತವೆಂತು ಪ್ರಸಾದಿಯ ಪಥವಂತು, ಪ್ರಾಣಾಲಿಂಗಿಯ ಶ್ರುತವೆಂತು ಶರಣನ ವ್ರತವೆಂತು ಐಕ್ಯನ ಕೃತವೆಂತು? ಅತ್ತಣ ಪ್ರಾಣ ಅತ್ತಲೆ, ಇತ್ತಣ ಕಾಯ ಇತ್ತಲೆ ತಾ ಭಕ್ತನಾದ ಪರಿಯೆಂತು ಹೇಳಿರಯ್ಯ: ಕತ್ತೆ ಹೊಂಕರಿಸಿದರೇನು, ಮಂತ್ರವೆ? ಕಾಯ ಬೂದಿಯೊಳು ಹೊರಳಿದರೇನು, ಭಸಿತವೆ? ವ್ಯರ್ಥ ಮಾತ ಕಲಿತು ಓದಿದರೇನು, ಸಾಹಿತ್ಯದ ಶಬ್ದವೆ? ಭಕ್ತನಹುದು, ನಿಮ್ಮಲಿ ಐಕ್ಯವಾದಾತ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.