Index   ವಚನ - 44    Search  
 
ಆದಿ ಸಿಂಹಾಸನವಾಗಿ, ಫಣಿ ಭೂಷಣವಾಗಿ, ಕೂರ್ಮನುತ್ತಮಾಂಗವಾಗಿ, ದಿಕ್ಕರಿಗಳೆಂಟೂ ಪುಷ್ಪವಾಗಿ, ಹದಿನಾಲ್ಕು ಭುವನದೊಳಗೊಂದಾಗಿ, ಮೇರುಗಿರಿ ನಾಲ್ಕು ದಿಕ್ಕೂ ಶೃಂಗಾರವಾಗಿ, ಮೇರು ರುದ್ರನ ಹಾವುಗೆಯಾದ ಪರಿಯೆಂತೊ? ಹೊತ್ತುದನತಿಗಳೆದು ನಿಜದೊಳಗೆ ನಿಲಬಲ್ಲಡೆ ನಿರಾಕಾರವ ನಿರ್ಮಿಸಬಾರದು. ನಿರಾಕಾರವ ನಿಯಮಿಸುವಡೆ ಕರಣಾದಿಕಂಗಳಲ್ಲಿ ಕಂದೆರದಡೆ ಜನನಕ್ಕೆ ದೂರ. ಆಕಾರದಾಯು ಆಧಾರವಾಯು ಬ್ರಹ್ಮರಂಧ್ರದೊಳಗೆ ಕಾರಣಪುರುಷ ತಾನಾಗಿದ್ದು, ಆರೈದು ಗಮನಿಸುವನಲ್ಲದೆ ಕಾಯದಿಚ್ಛೆಗೆ ನಡೆದು ಸ್ಥಿತಿಕಾಲಕ್ಕೆ ಗುರಿಯಹನಲ್ಲ. ಕಾಯ ಭೋಗಿಸುವ ಭೋಗವ ಭುಂಜಿಸುವನ್ನಕ್ಕರ ವಾಯುಪ್ರಾಣಿ ಸಾಯದಲ್ಲಾ, ಅದೇನು ಕಾರಣವೆಂದಡೆ ಕರ್ಪುರದ ಪುತ್ಥಳಿಯ ಕಿಚ್ಚಿನಲ್ಲಿ ಸುಟ್ಟು ಅಸ್ಥಿಯನರಸಲುಂಟೆ? ಜ್ಞಾನಾಗ್ನಿಯಿಂದ ಪ್ರಾಣಭೋಗ ನಷ್ಟ, ಆಕಾರದ ಪ್ರಾಣದ ಪರಿ ನಷ್ಟ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.