ಆಹ್ವಾನ ವಿಸರ್ಜನೆಗಳ ಮಾಡಲೇಕಯ್ಯ ಶರಣಂಗೆ?
ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ
ಶರಣ ಐಕ್ಯನೆಂದೆನಿಸಿದ ಬಳಿಕ
ಉಂಟೆ ಲೌಕಿಕರ ಉಪಚಾರಂಗಳು?
ನಿತ್ಯನಿರಂಜನನೈಕ್ಯನೆಂಬ
ನಿರೂಪದಲ್ಲಿ ಸ್ವರೂಪ ತಾನಾದ ಬಳಿಕ
ಉಂಟೆ ಲೌಕಿಕರ ತನುವಿನಂತೆ ತನುಗುಣ?
ತನುಗುಣ ನಾಸ್ತಿಯಾದ ಬಳಿಕ, ಉಂಟೆ ತಾಮಸಕ್ಕೆ ಎಡೆ? ಇಲ್ಲ.
ಅದು ಹೇಗೆಂದಡೆ-
ಗುರುಕೃಪಾದೃಷ್ಟಿಯಿಂದ ತಾನೆಯಾದ ಬಳಿಕ
ಇಲ್ಲಿಲ್ಲ ದೇಹಾದಿ ವಿಕಾರಂಗಳು,
ಇಲ್ಲಿಲ್ಲ ಕರಣೇಂದ್ರಿಯಾದಿ ವಿಕಾರಂಗಳು.
ಅದ್ವೈತವ ಮೀರಿದೆ, ಬೊಮ್ಮವ ಸಾರಿದೆ,
ಸಾಕಾರವ ಹರಿದೆನು. [ಇದರಿಂದ] ನೂನೈಶ್ವರ್ಯವದುಂಟೆ?
ವಾಙ್ಮಾನಸಜಿಹ್ವೆಗೆ ಅಗೋಚರವಾಗುತಿದ್ದಂತಹ ವಸ್ತುವ ಕಂಡೆ.
ಸಕಲ ಶೂನ್ಯಾತೀತವ ಎಯ್ದಿದೆ, ಸ್ವಾನುಭಾವವನೊಡಗೂಡಿದೆ.
ಮಹಾಲಿಂಗದ ಬಾಧೆ ಬಂದಡೆ ಉಣ್ಣೆನು, ಉಂಡಡೆ ಕಾಣೆ,
ಕಂಡಡೆ ಮುಗಿಲ ಮುಟ್ಟಿದುದರುದ್ದವ ನೋಡಾ.
ಎಂದು ದೀಕ್ಷೆ ಶಿಕ್ಷೆ ಸ್ವಾನುಭಾವವ ಸಂಬಂಧಿಸಿ
ಶುದ್ಧ ನಿಷ್ಕಲವಾದ ಬಳಿಕ ಮರಳಿ ಪ್ರಪಂಚಿನ ಹಂಗುಂಟೆ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ?
Art
Manuscript
Music
Courtesy:
Transliteration
Āhvāna visarjanegaḷa māḍalēkayya śaraṇaṅge?
Bhakta māhēśvara prasādi prāṇaliṅgi
śaraṇa aikyanendenisida baḷika
uṇṭe laukikara upacāraṅgaḷu?
Nityaniran̄jananaikyanemba
nirūpadalli svarūpa tānāda baḷika
uṇṭe laukikara tanuvinante tanuguṇa?
Tanuguṇa nāstiyāda baḷika, uṇṭe tāmasakke eḍe? Illa.
Adu hēgendaḍe-
Gurukr̥pādr̥ṣṭiyinda tāneyāda baḷika
illilla dēhādi vikāraṅgaḷu,
illilla karaṇēndriyādi vikāraṅgaḷu.
Advaitava mīride, bom'mava sāride,
sākārava haridenu. [Idarinda] nūnaiśvaryavaduṇṭe?
Vāṅmānasajihvege agōcaravāgutiddantaha vastuva kaṇḍe.
Sakala śūn'yātītava eydide, svānubhāvavanoḍagūḍide.
Mahāliṅgada bādhe bandaḍe uṇṇenu, uṇḍaḍe kāṇe,
kaṇḍaḍe mugila muṭṭidudaruddava nōḍā.
Endu dīkṣe śikṣe svānubhāvava sambandhisi
śud'dha niṣkalavāda baḷika maraḷi prapan̄cina haṅguṇṭe
uriliṅgapeddipriya viśvēśvarā?