ಬ್ರಹ್ಮದೇವರಾದರೆ ತಾನೇರುವ ಹಂಸೆಯಿಂದಲಿ ಬಿತ್ತಿ ಬೆಳೆದು
ಅದರ ಕ್ಷೀರಪ್ರಸಾದದಿಂದ ತೃಪ್ತರಾಗಿ
ಅದರ ಮೂತ್ರ ಹಿಕ್ಕೆಯಿಂದ ಪವಿತ್ರ ಪಾವನನಾಗನೇತಕ್ಕೆ?
ವಿಷ್ಣು ತಾ ದೈವನಾದರೆ ತಾನೇರುವ ಗರುಡನಿಂದ ಬಿತ್ತಿ ಬೆಳೆದು
ಅದರ ಕ್ಷೀರ ಪ್ರಸಾದದಿಂದ ತೃಪ್ತರಾಗಿ
ಅದರ ಮೂತ್ರ ಹಿಕ್ಕೆಯಿಂದ ಪವಿತ್ರ ಪಾವನನಾಗನೇತಕ್ಕೆ?
ವಿನಾಯಕ ಭೈರವ ಮೈಲಾರ ಜಿನ ಇವರು ದೇವರಾದರೆ
ತಾವು ಏರುವ ಇಲಿ ಚೇಳು ಕುದುರೆ ಕತ್ತೆಗಳಲ್ಲಿ ಬಿತ್ತಿ ಬೆಳೆದು
ಅವರ ಕ್ಷೀರ ಪ್ರಸಾದದಿಂದ ತೃಪ್ತರಾಗಿ
ಅವರ ಮೂತ್ರದಿಂದ ಪವಿತ್ರರಾಗರೇತಕ್ಕೆ?
ಅಯ್ಯಾ, ಇಂತೀ ಭೇದವನರಿಯದ
ಅವಿಚಾರಿ ಹೀನರ ಮಾತದಂತಿರಲಿ,
ಬ್ರಹ್ಮರು ಇಂದ್ರ ದಿಕ್ಪಾಲಕರು ಮುಂತಾಗಿ ಸಮಸ್ತದೇವರ್ಕಳೆಲ್ಲ
ಕೊಂಬದು ಉಂಬುದು ಗೋ ವೃಷಭನ ಅಮೃತ ಪ್ರಸಾದ,
ಆ ಗೋಮಯದಿಂದ ಪಾವನ ಶುದ್ಧ
ಆ ಮೂತ್ರದಿಂದ ಪವಿತ್ರ ಪಾವನ ಶುದ್ಧರಯ್ಯ.
ಆ ವೃಷಭನ ವಿಭೂತಿಯಿಂದ ಸಮಸ್ತದೇವತಾದಿಗಳು
ಸರ್ವಮುನಿಜನಂಗಳೆಲ್ಲ ಧರಿಸಿ ಬ್ರಹ್ಮತ್ವಂ ಪಡೆದು
ಮುಕ್ತಿಫಲಪದವಾಯಿತ್ತು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.