Index   ವಚನ - 203    Search  
 
ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣನೈಕ್ಯನೆಂಬ ಭೇದ ಸಂದಿಲ್ಲದೊಂದಾಗಿ ಹೇಳುವೆನು: ಭಕ್ತನೆಂಬಾತ ತನುಗುಣನಾಸ್ತಿಯಾಗಿ ಕಾಯದ ಕ[ರ]ಂಗಳಿಂದ ಬಂದ ಪದಾರ್ಥವ ಸೂಕ್ಷ್ಮಕರದಲ್ಲಿ ರೂಪಿಂಗರ್ಪಿಸಿ ರುಚಿಯ ನಿರೂಪಿಂಗರ್ಪಿಸುವ ಭೇದ ಅಂಗಾನಾಂ ಲಿಂಗಸಂಬಂಧೋ ಅಂಗಭಾವವಿಮುಕ್ತಯೇ| ಅಂಗಲಿಂಗಸಮಾಯುಕ್ತೋ ಜೀವೋ ಲಿಂಗಂ ಸದಾಶಿವಃ|| ಲಿಂಗಸಂಗಸ್ಯ ಮಾತ್ರೇಣ ಮನಃಪ್ರಾಪ್ನೋತಿ ಲಿಂಗತಾಂ| ಲಿಂಗಾರ್ಪಣಮಿದಂ ದೇವಿ ಪ್ರಾಣಲಿಂಗಾರ್ಚನಂ ಸದಾ|| ಲಿಂಗಪ್ರಸಾದಂ ಭುಂಜೀಯಾತ್ ಕೇವಲಂ ಜ್ಯೋತಿರೂಪವತ್| ಅಸಂಸ್ಕಾರಿಕೃತಾ ಪೂಜಾ ಪ್ರಸಾದೋ ನಿಷ್ಫಲೋ ಭವೇತ್|| ಎಂದುದಾಗಿ, ಇಂತು ವರ್ಮಸಕೀಲಂಗಳನರಿದು ತಾತ್ಪರ್ಯವರ್ಮ ಕಳೆಗಳನರಿದು ಶಿವಲಿಂಗಾರ್ಚನೆಯಂ ಮಾಡಲಾಗಿ ಆತನೀಗ ಲಿಂಗಭಕ್ತ. ಇನ್ನು ಮಾಹೇಶ್ವರಾದಿಭೇದಂಗಳಂ ಪೇಳ್ವೆ: ಕಂಗಳು ಭಕ್ತ, ಎನ್ನ ಕಿವಿಗಳು ಭಕ್ತ ಎನ್ನ ನಾಸಿಕ ಭಕ್ತ, ಎನ್ನ ಇವು ಮೊದಲಾದ ಕರಚರಣಾದ್ಯವಯವಂಗಳೆಲ್ಲವನೂ ಸದ್ಗುರುಸ್ವಾಮಿ ಭಕ್ತನ ಮಾಡಿದನಾಗಿ ಮನವ ಬಯಲನೈದಿಸಿದನಾಗಿ ಬಾಹ್ಯಕರದರ್ಪಣೆಯಂ ತ್ಯಜಿಸಿ ಸೂಕ್ಷ್ಮಮನದ ಕರದಿಂದ ಬಂದ ಪದಾರ್ಥದ ಪೂರ್ವಾಶ್ರಯವ ಕಳದು ರುಚಿಪದಾರ್ಥದ ನಿರೂಪ ಲಿಂಗಕ್ಕೆ ಅನಾಹತಕಾಯದ ಕರದಿಂದ ನಿರಂತರ ಅರ್ಪಿಸಿ ಮನ ಆನಂದವನೈದಲಾಗಿ ಮಾಹೇಶ್ವರ. ಪ್ರಾಣೀ ತು ಲಿಂಗಸಂಬಂಧೀ ಪ್ರಾಣಲಿಂಗೀ ಪ್ರಕೀರ್ತಿತಃ| ಸದಾಚಾರಮಿದಜ್ಞೇಯಂ ಪ್ರಾಣಲಿಂಗಪ್ರಸಾದತಃ|| ಪ್ರಾಣ ಪರಿಣಾಮ ಈ ಗುಣ ಅಳವಟ್ಟುದಾಗಿ ಪ್ರಸಾದಿ [ಪ್ರಾಣಲಿಂಗಿ]ಸ್ಥಲಃ ಆಚಾರಲಿಂಗಸಂಬಂಧಂ ಪ್ರಾಣಮೇವ ಪ್ರಕೀರ್ತಿತಂ| ಇದಂ ಜ್ಞಾನಂ ತು ಭುಂಜೀಯಾತ್ ಪದಮೇವ ಪದಂ ಶೃಣು|| ದ್ವಯಮೇವಮಿದಂ ದೇವಿ ವಿಶೇಷಂ ಭಕ್ತಿಬುದ್ಧಿಮಾನ್| ಶರಣಸ್ಥಲ[ವೈ]ಕ್ಯಮಂ ಪೇಳ್ವೆ : ಅರಿವರಿತು ಮರಹು ನಷ್ಟವಾದಲ್ಲಿ? ಆಚಾರಪ್ರಾಣ ಭಕ್ತ ಆಚಾರವರಿತು ಅನಾಚಾರವ ನಷ್ಟವಾದಲ್ಲಿ ಮಾಹೇಶ್ವರ, ಕ್ರಿಯಾಕಾರವರಿತು ನಿಷ್ಕಳ ನೆಲೆಗೊಂಡಲ್ಲಿ ಪ್ರಸಾದಿ, ಸಕಲಶೂನ್ಯವಾಗಿ ನಿಷ್ಕಳ ನೆಲೆಗೊಂಡಲ್ಲಿ ಪ್ರಾಣಲಿಂಗಿ, ಸ್ವಾನುಭಾವ ಸಂಬಂಧಿಸಿ ಅವಧಾನ ತಾನೆ ಗುರುವಾದಲ್ಲಿ ಶರಣ, ಆಚಾರಪ್ರಾಣವಾಗಿ ಬಾಹ್ಯಪೂಜೆಯನರಿದು ಮನದ ಕರದಲ್ಲಿ ಇಷ್ಟಲಿಂಗಾರ್ಚನೆಯಂ ಮಾಡಬಲ್ಲಡೆ ಐಕ್ಯ. ಷಡುಸ್ಥಲಾಧಿಕಾರಮಂ ಪೇಳ್ವೆ : ಲಿಂಗಾರ್ಚನಮಿದಂ ದೇವಿ ನ ಕುರ್ಯಾದ್ವರ್ಣಮೋಹಿತಃ| ಅಸಂಸ್ಕಾರಿಕೃತಾ ಪೂಜಾ ಸಾ ಪೂಜಾ ನಿಷ್ಫಲಾ ಭವೇತ್|| ಅಂಗಾಂಗಲಿಂಗಸಂಬಂಧಿಯಾದ ಶರಣರು, ಅನಾಹತಶೂನ್ಯರಾದವರಲ್ಲದೆ, ಬದ್ಧದ್ವೇಷಿಗಳು, ಬಧಿರಹೃದಯರು, ಅಜ್ಞಾನವರ್ಧನರು ಕೇವಲ ತಾತ್ಪರ್ಯವರ್ಮ ಕಳೆಗಳ ಸುಧಾಸುಚಿತ್ತ ಸದಾಸ್ವಾನುಭಾವ ಸಂಬಂಧಿಗಳ ಮಹಾನಿಲವನೆತ್ತಬಲ್ಲರಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.