Index   ವಚನ - 235    Search  
 
ಕಾಯ ಇಂದ್ರಿಯಂಗಳಲ್ಲಿ ಮಚ್ಚಿ ಇಹನ್ನಕ್ಕ ಭಕ್ತಿಸ್ಥಲವಿಲ್ಲ. ಆತ್ಮ ಹಲವು ವಿಷಯಂಗಳಲ್ಲಿ ಹರಿವನ್ನಕ್ಕ ಮಾಹೇಶ್ವರಸ್ಥಲವಿಲ್ಲ. ಹಿರಿದು ಕಿರಿದನರಿದು ರೋಚಕ ಆರೋಚಕವೆಂಬನ್ನಕ್ಕ ಪ್ರಸಾದಿಸ್ಥಲವಿಲ್ಲ. ಜಾಗ್ರದಲ್ಲಿ ಕಂಡು ಸ್ವಪ್ನದಲ್ಲಿ ತೋರಿ ಸುಷುಪ್ತಿಯಲ್ಲಿ ಅಳಿವನ್ನಕ್ಕ ಪ್ರಾಣಲಿಂಗಸಂಬಂಧಿಯಲ್ಲ. ಚತುರ್ವಿಧಫಲಪದಂಗಳಲ್ಲಿ ಕಾಬ ಕಾಣಿಕೆ ಉಳ್ಳನ್ನಕ್ಕ ಶರಣಸ್ಥಲವಿಲ್ಲ. ಅರಿದೆ ಮರೆದೆನೆಂದು ಉಭಯದ ಸಂದೇಹವುಳ್ಳನ್ನಕ್ಕ ಐಕ್ಯಸ್ಥಲವಿಲ್ಲ. ಇಂತೀ ಷಟ್ಸ್ಥಲಂಗಳಲ್ಲಿ ಸೋಪಾನದ ಮೆಟ್ಟಿಲಿನಂತೆ, ಒಂದ ಮೆಟ್ಟಿ ಒಂದನೇರುವನ್ನಕ್ಕ ಸ್ಥಲಕುಳಭರಿತನಾಗಬೇಕು. ಮೇಲನೇರಿ ಕೆಳಗೆ ಇಳಿಯೆನೆಂಬ ಭಾವ ನಿಂದಲ್ಲಿ ಆರನೆಣಿಸಲಿಲ್ಲ. ಮೂರೆಂದು ಬೇರೊಂದ ಮುಟ್ಟಲಿಲ್ಲ. ಕರಗಿದ ಬಂಗಾರಕ್ಕೆ ಕರಚರಣಾದಿಗಳು ಇಲ್ಲದಂತೆ, ಆತ ಕುರುಹಡಗಿದ ಷಡುಸ್ಥಲಬ್ರಹ್ಮಿ, ನಿಃಕಳಂಕ ಮಲ್ಲಿಕಾರ್ಜುನಾ.