Index   ವಚನ - 568    Search  
 
ಭಕ್ತ ಮಾಹೇಶ್ವರ ಪ್ರಸಾದಿ ಈ ಮೂರು ಭಕ್ತನಂಗ. ಪ್ರಾಣಲಿಂಗಿ ಶರಣ ಐಕ್ಯ ಈ ಮೂರು ಜಂಗಮದಂಗ. ಮೂರಕ್ಕಾರು ಸತಿಪತಿಭೇದವನರಿವುದು. ಆ ಆರರ ಒದಗು ಇಪ್ಪತ್ತೈದರ ಬೀಜ. ಈ ಭೇದವನರಿದ ಮತ್ತೆ ನೂರೊಂದು ಆರರಲ್ಲಿ ಅಡಗಿ, ಆ ಆರು ಐದರಲ್ಲಿ ನಿಂದು, ಐದು ಮೂರರಲ್ಲಿ ನಿಂದು ಭೇದಿಸಿ, ಮೂರು ಒಂದರಲ್ಲಿ ನಿಂದು ಸಂದೇಹವಳಿಯಿತ್ತು. ಇಂತು ಎನ್ನ ಭ್ರಮೆ ಹಿಂಗಿತ್ತು. ಇಂತಿವರ ನಾನಾ ಸ್ಥಳ ಕುಳಂಗಳೆಲ್ಲವು ಆದಿಗತೀತವಾದ ಮತ್ತೆ ಭಾವದ ಗುರುವೆನಲೇಕೆ ? ಅವತಾರದ ಲಿಂಗವೆನಲೇಕೆ ? ಅರಿದು ಮರೆದವ ಜಂಗಮವೆನಲೇಕೆ ? ಇಂತಿವ ಕಂಡೂ ಕಾಣದ, ನಂಬಿಯೂ ನಂಬದ ಸಂದೇಹಿಗೇಕೆ, ಗುರು ಲಿಂಗ ಜಂಗಮ ? ಪ್ರಥಮ ಕ್ರಿಯೆಯಲ್ಲಿ ಮೋಸ, ಜ್ಞಾನಕ್ಕೆ ಲಾಭವೆ ? ಇದು ದೃಷ್ಟದ ದರ್ಪಣದ ಒಳಹೊರಗಿನಂತೆ ತಿಳಿದು ನೋಡೆ, ಉಭಯಸ್ಥಲವೈಕ್ಯ ನಿಃಕಳಂಕ ಮಲ್ಲಿಕಾರ್ಜುನಾ.